ಭಾಷೆ
ಕೊಡವ ಭಾಷೆ ಮತ್ತು ಸಾಹಿತ್ಯ

ಕರ್ನಾಟಕದ ಒಂದು ಜಿಲ್ಲೆಯಾದ ಕೊಡಗಿನಲ್ಲಿ ನೆಲಸಿರುವ ಕೊಡವ ಜನಾಂಗದವರು ಮಾತನಾಡುವ ಭಾಷೆಯನ್ನು ಕೊಡವ ಎಂದು ಕರೆಯುತ್ತಾರೆ. ಕೊಡಗು, 1956ರಲ್ಲಿ ಕರ್ನಾಟಕದೊಂದಿಗೆ ವಿಲೀನವಾಗುವುದಕ್ಕಿಂತ ಮೊದಲು ಸ್ವತಂತ್ರ ರಾಜ್ಯವಾಗಿತ್ತು. ಕೊಡವ ಜನಾಂಗದವರಿಗೆ ತಮ್ಮದೇ ಆದ ಸಂಸ್ಕೃತಿಯಿದೆ ಮತ್ತು ಅವರ ಭಾಷೆಯು ಆ ಸಂಸ್ಕೃತಿಯನ್ನು ತನ್ನೊಳಗೆ ಹುದುಗಿಸಿಕೊಂಡಿದೆ. ಈ ಭಾಷೆಯನ್ನು ತಾಯಿನುಡಿಯಾಗಿ ಹೊಂದಿರುವವರು ಅದನ್ನು ಕೊಡವ ತಕ್ಕ್ಎಂದೂ ಕರೆಯುತ್ತಾರೆ. ಇದಲ್ಲದೆ ಕಡಗಿ, ಖುರ್ಗಿ, ಕೊಟಜು ಮತ್ತು ಕುರ್ಜ ಎಂಬ ಹೆಸರುಗಳನ್ನೂ ಬಳಸುತ್ತಾರೆ. 1997 ರ ಜನಗಣತಿಯ ಪ್ರಕಾರ ಕೊಡವ ಮಾತೃಭಾಷಿಕರ ಸಂಖ್ಯೆ 1,20,000.

ಕೊಡವರು ಮಾತ್ರವಲ್ಲ. ಕೊಡಗಿನಲ್ಲಿ ನೆಲೆಸಿರುವ ಇತರ ಸಮುದಾಯಗಳವರೂ ಆ ಭಾಷೆಯನ್ನು ಉಪಯೋಗಿಸುತ್ತಾರೆ. ಅಯಿರಿ, ಮಲೆ ಕುಡಿಯ, ಮೇದ, ಕೆಂಬಟ್ಟಿ, ಕಪಾಲ, ಮರಿಂಗಿ, ಹೆಗ್ಗಡೆ, ಕಾವಡಿ, ಕೊಲ್ಲ, ಥಟ್ಟ, ಕೊಲೆಯ, ಕೊಯವ, ಗೊಲ್ಲ, ಬಣ್ಣ, ಕನ್ಯ, ಗಾಣಿಗ ಮತ್ತು ಮಲಯಗಳು ಅಂತಹ ಕೆಲವು ಸಮುದಾಯಗಳು. ಕೊಡವ ಭಾಷೆಯು, ದ್ರಾವಿಡಭಾಷಾಕುಟುಂಬಕ್ಕೆ. ಅದರಲ್ಲಿಯೂ ದಕ್ಷಿಣ ದ್ರಾವಿಡ ಭಾಷೆಗಳ ಗುಂಪಿಗೆ ಸೇರುತ್ತದೆ. ಆದರೆ ಕೊಡಗರು ದ್ರಾವಿಡ ಜನಾಂಗಕ್ಕೆ ಸೇರುವುದಿಲ್ಲ. ಈ ಸಂಗತಿಯು, ಇತಿಹಾಸದ ಯಾವುದೋ ಒಂದು ಹಂತದಲ್ಲಿ, ಕೊಡವರು ತಮ್ಮ ಮೂಲಭಾಷೆಯನ್ನು ಬಿಟ್ಟುಕೊಟ್ಟು, ಕೊಡವ ಭಾಷೆಯ ಒಂದು ನಿರ್ದಿಷ್ಟ ಹಂತವನ್ನು ಒಪ್ಪಿಕೊಂಡಿರಬೇಕೆಂಬ ತೀರ್ಮಾನಕ್ಕೆ ದಾರಿಮಾಡುತ್ತದೆ. ಕೊಡವ ಭಾಷೆಗೆ ತನ್ನದೇ ಆದ ಲಿಪಿಯು ಇಲ್ಲದಿರುವುದರಿಂದ, ಅದರ ಪ್ರಾಚೀನ ಸ್ವರೂಪವನ್ನು ತಿಳಿದುಕೊಳ್ಳುವುದು ಕಷ್ಟವಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬ್ಯಾರಿಗಳು ಬಳಸುವ ಬ್ಯಾರಿ ಭಾಷೆಗೂ ಕೊಡವ ಭಾಷೆಗೂ ಬಹಳ ಹೋಲಿಕೆಗಳಿವೆ. ಕೊಡವ ಭಾಷೆಯನ್ನು ಮಾತನಾಡುವರಲ್ಲಿ ಬಹುಪಾಲು ಜನರು ಎರಡು ಭಾಷೆಗಳನ್ನು ಬಲ್ಲವರು. ಅವರು ಕನ್ನಡದಲ್ಲಿಯೂ ಮಾತನಾಡುತ್ತಾರೆ.

ಸಾಮಾನ್ಯವಾಗಿ ಧ್ವನಿಗಳ ಮತ್ತು ಪದರಚನೆಯ ಹಂತದಲ್ಲಿ, ಕೊಡವ ಭಾಷೆಯು ಇತರ ದ್ರಾವಿಡ ಭಾಷೆಗಳನ್ನು ಹೋಲುತ್ತದೆ. ಆದರೆ, ಇದರಲ್ಲಿ ಬೇರೆ ಭಾಷೆಗಳಂತೆ ಹತ್ತು ಸ್ವರಗಳಿರದೆ, ಹನ್ನೆರಡು ಸ್ವರಗಳಿವೆ. ಮೊದಲನೆಯದು ಉನ್ನತ-ಮಧ್ಯ-ವಿವೃತ ಸ್ವರ.(/ï/) ಇನ್ನೊಂದು, ಮಧ್ಯ-ಮಧ್ಯ-ವಿವೃತ ಸ್ವರ. (/ë/) ಇವೆರಡನ್ನು ಅನುಕ್ರಮವಾಗಿ ಹ್ರಸ್ವ ಮತ್ತು ದೀರ್ಘ ಎಂದು ಕರೆಯಲಾಗಿದೆ. (ಬಾಲಕೃಷ್ಣನ್, 1976) ಕೊಡವರ ಆಡುಮಾತಿನಲ್ಲಿ ಮಹಾಪ್ರಾಣಾಕ್ಷರಗಳು ಇಲ್ಲ. ಪದದ ಮೊದಲಿನಲ್ಲಿ ಬರುವ ವ್ಯಂಜನಗಳ ಗೊಂಚಲನ್ನು, ಇತರ ಭಾಷೆಗಳಿಂದ ತೆಗೆದುಕೊಂಡ ಪದಗಳಲ್ಲಿ ಮಾತ್ರ ನೋಡಬಹುದು. ಕ್ರಿಯಾಪದಗಳು, ಪ್ರಥಮಪುರುಷದಲ್ಲಿಯೂ ಕೂಡ ಲಿಂಗವ್ಯತ್ಯಾಸವನ್ನು ತೋರಿಸುವುದಿಲ್ಲ. ಕೊಡವ ಭಾಷೆಯ ಶಬ್ದಕೋಶದಲ್ಲಿ ಪರ್ಷಿಯನ್, ಅರಾಬಿಕ್, ಉರ್ದು ಮತ್ತು ದ್ರಾವಿಡ ಭಾಷೆಗಳಿಂದ ತೆಗೆದುಕೊಂಡ ಅನೇಕ ಪದಗಳಿವೆ.

ಉಪಭಾಷಾವೈವಿಧ್ಯಗಳ ನೆಲೆಯಿಂದ ನೋಡಿದರೆ, ಉತ್ತರ ಕೊಡಗಿನಲ್ಲಿ ಮಾತನಾಡುವ ಉಪಭಾಷೆಯೇ, ಪ್ರಮಾಣಭಾಷೆಯೆಂದು ತಿಳಿಯುವಂತೆ ಕಾಣುತ್ತದೆ. ಇಲ್ಲಿ ಸಾಮಾಜಿಕ ಉಪಭಾಷೆಗಳು ಇಲ್ಲದಿರುವುದು ಕುತೂಹಲಕಾರಿಯಾದ ಸಂಗತಿ. ಈಚಿನ ದಿನಗಳಲ್ಲಿ ಕೊಡವ ಭಾಷೆಯು, ಜನಾಂಗಿಕ ಅನನ್ಯತೆಯ ಸಂಕೇತವಾಗಿ ರೂಪುಗೊಂಡಿದೆ ಮತ್ತು ಭಾಷಿಕರು ತಮ್ಮ ಭಾಷೆಯ ಸಂಗಡ ತೀವ್ರವಾದ ಸಂಬಂಧವನ್ನು ಹೊಂದಿದ್ದಾರೆ.ಕೊಡವ ಭಾಷೆಯ ಸ್ವಂತಿಕೆಯನ್ನು ಉಳಿಸಿಕೊಳ್ಳಲು ಆ ಮೂಲಕ ಅದರ ಸಂಸ್ಕೃತಿಯನ್ನೂ ಕಾಪಾಡಲು, ಭಾಷಾನೀತಿಯೊಂದನ್ನು ರೂಪಿಸಿಕೊಳ್ಳುವ ಅಗತ್ಯವಿದೆ.

ಲಿಪಿಯು ಇಲ್ಲದಿರುವುದರಿಂದ, ಕೊಡವ ಭಾಷೆಯ ಸಾಹಿತ್ಯವು ಬಹುಮಟ್ಟಿಗೆ ಮೌಖಿಕ ಆಕರಗಳಿಗೆ ಸೀಮಿತವಾಗಿದೆ. ಪಟ್ಟೋಲೆ ಪಳಮೆಕೊಡವರ ಜನಪದಗೀತೆಗಳು ಮತ್ತು ಪಾರಂಪರಿಕ ಆಚರಣೆಗಳ ಸಂಕಲನ. ಇದನ್ನು ನಡಿಕೇರಿಯಾಂಡ ಚಿಣ್ಣಪ್ಪನವರು, ಇಪ್ಪತ್ತನೆಯ ಶತಮಾನದ ಮೊದಲ ದಶಕಗಳಲ್ಲಿ ಸಂಗ್ರಹಿಸಿ, 1924 ರಲ್ಲಿ ಪ್ರಕಟಿಸಿದರು. ಇದು, ಭಾರತೀಯ ಭಾಷೆಗಳಲ್ಲಿಯೇ, ಜನಪದಕ್ಕೆ ಸಂಬಂಧಪಟ್ಟ ಮಾಹಿತಿಗಳನ್ನು ಕಲೆಹಾಕುವ ಮೊದಮೊದಲ ಪ್ರಯತ್ನಗಳಲ್ಲಿ ಒಂದು. ಈ ಪುಸ್ತಕದ ಮೂರನೆಯ ಎರಡರಷ್ಟು ಭಾಗವು ಅನೇಕ ತಲೆಮಾರುಗಳಿಂದ ಹರಿದು ಬಂದಿರುವ ಹಾಡುಗಳನ್ನು ಒಳಗೊಂಡಿದೆ. ಇವುಗಳಲ್ಲಿ ಅನೇಕ ಹಾಡುಗಳನ್ನು ಈಗಲೂ ಮದುವೆಯ ಮತ್ತು ಸಾವಿನ ಸಂದರ್ಭಗಳಲ್ಲಿ ಹಾಡುತ್ತಾರೆ. ಅಂತೆಯೇ, ವಿಭಿನ್ನ ಋತುಗಳಿಗೆ ಸಂಬಂಧಪಟ್ಟ ಹಬ್ಬದ ಆಚರಣೆಗಳಲ್ಲಿ ಮತ್ತು ಸ್ಥಳೀಯ ದೇವತೆಗಳು ಮತ್ತು ನಾಯಕರನ್ನು ಸ್ಮರಿಸಿಕೊಳ್ಳುವ ಹಬ್ಬಗಳಲ್ಲಿ ಈ ಹಾಡುಗಳಿಗೆ ಅವಕಾಶವಿದೆ. ಅಪ್ಪಚ್ಚು ಕವಿ ಬರೆದಿರುವ ನಾಲ್ಕು ನಾಟಕಗಳು ಮತ್ತು ಬಿ.ಡಿ. ಗಣಪತಿಯವರು ಬರೆದಿರುವ ಕುತ್ತುಂಬೊಳಿಚ್ಚಎಂಬ ಕಾದಂಬರಿ, ಕೊಡವ ಭಾಷೆಯ ಮುಖ್ಯ ಸಾಹಿತ್ಯ ಕೃತಿಗಳು.

 

ಮುಂದಿನ ಓದು:

    1. Phonology of Kodagu with Vocabulary by R. Balakrishnan, 1974, Annamalai University.
    2. A Grammar of Kodagu, R.Balakrishnan, 1978, Annamali University.
    3. A Tiny Model State of South India by I.M. Muthanna, 1953.
    4. An Elementary Grammar of the Coorg language by R.A. Cole
    5. Kodava Speech Community: An Ethno Lingustic Study, K.S. Rajyashri, “Language in India’, Volume 1, No. 6, 2001, C.I.I.L., Mysore.
    6. The Dravidian Languages by Bhadriraju Krishnamurthy, 2003, Cambridge University Oress.
    7. K S Rajyashree, Kodava speech community : An ethnolinguistic study

ಮುಖಪುಟ / ಭಾಷೆ